ವಿಷ್ಣುವರ್ಧನ 1

ಹೊಯ್ಸಳವಂಶದ ಸುಪ್ರಸಿದ್ಧ ರಾಜ (ಸು. 1108-42). ಬಿಟ್ಟಿದೇವ ಇವನ ಇನ್ನೊಂದು ಹೆಸರು. ಎರೆಯಂಗನ 2ನೆಯ ಮಗ. ಅಣ್ಣ ಬಲ್ಲಾಳನ ಮರಣಾನಂತರ ಪಟ್ಟಕ್ಕೆ ಬಂದ. ತಂದೆ ಮತ್ತು ಅಣ್ಣನ ಜೊತೆಯಲ್ಲಿ ಆಡಳಿತದಲ್ಲಿ ಮತ್ತು ಅನೇಕ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದು, ರಾಜನಾದ ಅನಂತರ ಆ ಅನುಭವವನ್ನು ಪೂರ್ಣವಾಗಿ ಉಪಯೋಗಿಸಿಕೊಂಡು, ಹೊಯ್ಸಳ ಬಲವನ್ನು ಸರ್ವತೋಮುಖವಾಗಿ ವರ್ಧಿಸಿ, ಚಿಕ್ಕ ನಾಡಾಗಿದ್ದ ಹೊಯ್ಸಳ ರಾಜ್ಯವನ್ನು ಬಹುಮಟ್ಟಿಗೆ ವಿಸ್ತರಿಸಿ ಸ್ವತಂತ್ರ ಹೊಯ್ಸಳ ಸಾಮ್ರಾಜ್ಯವನ್ನು ಕಟ್ಟಿದ. ಈತ ಸಮಕಾಲೀನ ದಕ್ಷಿಣ ಭಾರತದ ರಾಜಕೀಯದಲ್ಲಿ ವಿಶೇಷ ಶಕ್ತಿಗಳಾಗಿದ್ದ ಚೋಳ-ಚಾಳುಕ್ಯರಿಬ್ಬರನ್ನೂ ಎದುರಿಸಿ, ಈ ಪ್ರದೇಶದ ಮೂರನೆಯ ಶಕ್ತಿಯಾಗಿ ನೆಲೆಗೊಂಡು, ಮುಂದೆ ಸು. 200 ವರ್ಷಗಳ ಕಾಲ ಕರ್ನಾಟಕದ್ದೇ ಏಕೆ, ಇಡೀ ದಕ್ಷಿಣ ಭಾರತದ ಇತಿಹಾಸದಲ್ಲಿ ಅಪ್ರತಿಮವಾಗಿ ಮೆರೆದ ಹೊಯ್ಸಳ ಬಲದ ಸ್ಥಾಪಕನಾದ. ಕೀರ್ತಿಶಾಲಿ, ಶೂರ, ಚತುರ ಆಡಳಿತಗಾರ, ಕಲೆ-ಸಾಹಿತ್ಯಗಳ ಪೋಷಕ.

	ವಿಷ್ಣುವರ್ಧನ ಚಿಕ್ಕಂದಿನಿಂದಲೇ ತಂದೆಯ ಜೊತೆಯಲ್ಲಿ ಚಾಳುಕ್ಯ 6ನೆಯ ವಿಕ್ರಮಾದಿತ್ಯನ ಪರವಾಗಿ ಚಕ್ರಕೂಟ ವಿಜಯದಲ್ಲಿಯೂ ಸೋಮೇಶ್ವರ ವಿರುದ್ಧ ನಡೆದ ಯುದ್ಧದಲ್ಲೂ ಭಾಗವಹಿಸಿದ್ದ. ಬಹುಶಃ ಕೆಲವುಕಾಲ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಪ್ರಾಂತದ ಪ್ರಾಂತಾಧಿ ಕಾರಿಯೂ ಆಗಿದ್ದ. ಆ ಊರು ವಿಷ್ಣುವರ್ಧನ ಚತುರ್ವೇದಿ ಮಂಗಲ ಎಂದೇ ಪ್ರಸಿದ್ಧವಾಗಿತ್ತು. ಇವನು ತನ್ನ ಅಣ್ಣ ಬಲ್ಲಾಳನ ಆಳಿಕೆಯಲ್ಲಿ ಅವನಿಗೆ ಬಲಗೈಯಂತಿದ್ದ. ಅಣ್ಣತಮ್ಮಂದಿರಲ್ಲಿದ್ದ ಗಾಢಮೈತ್ರಿಯನ್ನು ವಿವರಿಸುವ ಒಂದು ಶಾಸನ ಇವರನ್ನು ರಾಮ ಲಕ್ಷ್ಮಣರಿಗೆ ಹೋಲಿಸಿದೆ. ಗಂಗವಾಡಿಯಿಂದ ಚೋಳರನ್ನು ಓಡಿಸುವುದು ಹಾಗೂ ರಾಜ್ಯವನ್ನು ವಿಸ್ತರಿಸಿ ಚಾಳುಕ್ಯರ ಪರಮಾಧಿಕಾರವನ್ನು ಕೊನೆಗಾಣಿಸಿ ತನ್ನ ಸಂತತಿ ಸ್ವತಂತ್ರವಾಗಿ ಕನ್ನಡನಾಡಿನಲ್ಲಿ ಆಳುವಂತೆ ಮಾಡುವುದು ಈ ಎರಡು ಇವನ ಮುಖ್ಯಧ್ಯೇಯಗಳಾಗಿದ್ದವು.		
						
(ಜಿ.ಆರ್.ಆರ್.)

ಪಟ್ಟಾಭಿಷಿಕ್ತನಾದ ಕೂಡಲೇ ಈ ಧ್ಯೇಯ ಸಾಧನೆಗೆ ಎಚ್ಚರಿಕೆಯಿಂದ ಹೆಜ್ಜೆ ಇಡಲಾರಂಭಿಸಿದ. ಮೊದಲು ಪ್ರಬಲರಾದ ಚೋಳ ಮತ್ತು ಚಾಳುಕ್ಯರ ಮೇಲೆ ನೇರವಾಗಿ ಬೀಳದೆ ಅಂದಿನ ಹೊಯ್ಸಳ ರಾಜ್ಯದ ಸುತ್ತಲಿದ್ದ ತುಂಡರಸರನ್ನು ಹತ್ತಿಕ್ಕಿ, ದೇಶ, ಕೋಶ, ಸೈನ್ಯವರ್ಧನೆಗೆ ತೊಡಗಿದ. ಮೊದಲು ಚೋಳರಾಜ್ಯದ ಉತ್ತರಕ್ಕಿದ್ದ ಕೋಲಾರ, ನಂಗಲಿ ಪ್ರದೇಶಗಳನ್ನು ವಶಪಡಿಸಿಕೊಂಡು ಪಕ್ಕದಲ್ಲಿದ್ದ ಚಾಳುಕ್ಯ ಸಾಮಂತರಾದ ಉಚ್ಚಂಗಿಯ ಪಾಂಡ್ಯರ ಮೇಲೆ ಜಯಸಾಧಿಸಿದ (ಸು. 1111-13) ಈ ಕಾಲದಲ್ಲಿ ಬನವಾಸಿ ಪ್ರಾಂತಾಧಿಕಾರಿಗಳಿಗೂ ಚಾಳುಕ್ಯ ಸಾರ್ವಭೌಮರಿಗೂ ವಿರಸವುಂಟಾಗಿದ್ದ ಸೂಚನೆಗಳಿದ್ದವು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಹಾನುಗಲ್ಲು ಮತ್ತು ಬನವಾಸಿಯ ಕದಂಬ ಅರಸುಗಳನ್ನು ಹತ್ತಿಕ್ಕಿದ (ಸು. 1113-14). ಹಾಗೆಯೇ ಪಕ್ಕದ ತುಳುನಾಡಿನ ಮೇಲೂ ದಾಳಿಯಿಟ್ಟ (ಸು. 1114-15?). ದಕ್ಷಿಣದಲ್ಲಿ ಕೊಂಗಾಳ್ವ, ಚೆಂಗಾಳ್ವರನ್ನು ಇವನ ದಂಡನಾಯಕನಾದ ಪುಣಿಸ ಬಗ್ಗುಬಡಿದು ನೀಲಗಿರಿಯ ಮೇಲೆ ಹೊಯ್ಸಳ ಧ್ವಜವನ್ನು ಸ್ಥಾಪಿಸಿ, ಮಲೆಯಾಳರನ್ನು ಬೆನ್ನಟ್ಟಿದ. ಆದರೆ 1115-16ರಲ್ಲಿ ಕೊಂಗಾಳ್ವ ಅರಸು ತನ್ನ ಮಗಳು ಚಂಚಲದೇವಿಯನ್ನು ವಿಷ್ಣುವರ್ಧನನಿಗೆ ಮದುವೆಮಾಡಿ ಕೊಟ್ಟು ರಾಜಿ ಮಾಡಿಕೊಂಡ. ಈ ಎಲ್ಲ ಕ್ಷಾತ್ರ ಸಾಧನೆಗಳಲ್ಲಿ ವಿಷ್ಣುವರ್ಧನನಿಗೆ ಇವನ ನಿಷ್ಠಾವಂತ ದಂಡನಾಯಕರಾದ ಗಂಗರಾಜ, ಪುಣಿಸ, ಮರಿಯಾನೆ, ಭರತ ಮುಂತಾದವರು ನೆರವಾಗಿದ್ದರು. ಸಾಮಾನ್ಯತಃ ಪ್ರಾಚೀನ ಗಂಗಸಾಮಂತ ಕುಲಗಳಿಗೆ ಸೇರಿದ್ದ ಈ ದಂಡನಾಯಕರು ವೀರಗಂಗ, ಗಂಗವಾಡಿ96000ದ ಅಧಿಪತಿ ಎಂದು ಕರೆದುಕೊಳ್ಳುತ್ತಿದ್ದ ವಿಷ್ಣುವರ್ಧನನಂತೆಯೇ ಚೋಳರ ವಶದಲ್ಲಿದ್ದ ಗಂಗವಾಡಿಯ ಭಾಗಗಳನ್ನು ಬಿಡಿಸಿಕೊಳ್ಳಲು ತವಕಿಸುತ್ತಿದ್ದಿರಬೇಕು. ಈ ಹಿಂದಿನ ವಿಜಯಸರಣಿಯಿಂದ ಉತ್ತೇಜಿತನಾದ ವಿಷ್ಣುವರ್ಧನ, ಚೋಳರಾಜ ಕುಲೋತ್ತುಂಗ ವೆಂಗಿಮಂಡಲದ ಪರಿಸ್ಥಿತಿಯನ್ನು ಸರಿಪಡಿಸಲು ಉದ್ಯುಕ್ತನಾಗಿದ್ದ ಸಂದರ್ಭವನ್ನು ಉಪಯೋಗಿಸಿಕೊಂಡು ತಲಕಾಡಿನ ಮೇಲೆ ನುಗ್ಗಿದ (1116).

	ಆಗ ಆದಿಯಮ ತಲಕಾಡು ಪ್ರಾಂತದ ಪ್ರಾಂತಾಧಿಕಾರಿಯಾಗಿ ಚೋಳ ಸಾಮ್ರಾಟನಿಂದ ನೇಮಿತನಾಗಿದ್ದ. ಹೊಯ್ಸಳ ಸೈನ್ಯದ ನೇತೃತ್ವವನ್ನು ವಹಿಸಿದ್ದ ಗಂಗರಾಜ ರಕ್ತಪಾತಕ್ಕೆಡೆಗೊಡದೆ ತಲಕಾಡನ್ನು ಒಪ್ಪಿಸುವಂತೆ ಆದಿಯಮನಿಗೆ ದೂತರ ಮೂಲಕ ಹೇಳಿಕಳುಹಿಸಿದ. ಸಾಧ್ಯವಿದ್ದಲ್ಲಿ ಯುದ್ಧಮಾಡಿ ಜಯಗಳಿಸಿ ತಲಕಾಡನ್ನು ಪಡೆಯುವಂತೆ ಚೋಳ ಪ್ರಾಂತಾಧಿಕಾರಿ ಉತ್ತರಿಸಲು, ವಿಷ್ಣುವರ್ಧನನೂ ಗಂಗರಾಜನೂ ಹೊಯ್ಸಳ ಸೈನ್ಯವನ್ನು ತಲಕಾಡಿನತ್ತ ನಡೆಸಿದರು. ಆದಿಯಮ ಮತ್ತು ಚೋಳಸೈನ್ಯದ ದಂಡನಾಯಕರಾದ ದಾಮೋದರ ಹಾಗೂ ನರಸಿಂಹವ ರ್ಮನ್ ಎಂಬವರು ಹೊಯ್ಸಳ ಸೈನ್ಯಗಳನ್ನು ಎದುರಿಸಿ ಸೋತು ಓಡಿಹೋದರು.

	ತಲಕಾಡು ಹೊಯ್ಸಳರ ವಶವಾಗಿ, ಈ ವಂಶದ ಅರಸರ ಒಂದು ಮುಖ್ಯ ಧ್ಯೇಯ ಸಾಧಿತವಾಯಿತು. ಒಂದು ಚಿಕ್ಕ ಪ್ರಾಂತದ ರಾಜನಾಗಿದ್ದ ಒಬ್ಬ ಅರಸು ಬೃಹತ್ ಚೋಳ ಸಾಮ್ರಾಜ್ಯದ ಬಿಗಿ ಕೋಟೆಯೊಂದನ್ನು ಸಾಧಿಸಿಕೊಂಡುದು ಹೊಯ್ಸಳ ಇತಿಹಾಸದ ಒಂದು ಮೈಲಿಗಲ್ಲು. ಹೊಯ್ಸಳರ ಅನೇಕ ಶಾಸನಗಳು ಈ ತಲಕಾಡುವಿಜಯವನ್ನು ಹಲವು ಕಾಲದವರೆಗೆ ಸಕಾರಣವಾಗಿಯೇ ಹೆಮ್ಮೆಯಿಂದ ವರ್ಣಿಸುತ್ತವೆ. ಚೋಳರ ಪ್ರತೀಕಾರ ಯಾವುದೇ ಸಂದರ್ಭದಲ್ಲಾದರೂ ಒದಗಬಹುದೆಂಬುದನ್ನು ಅರಿತ ವಿಷ್ಣುವರ್ಧನ ರಕ್ಷಣೆಗಿಂತಲೂ ಮುನ್ನಡೆಯೇ ಉತ್ತಮವೆಂದು ಗ್ರಹಿಸಿ ಓಡುತ್ತಿದ್ದ ಚೋಳ ಸೈನ್ಯವನ್ನು ಬೆನ್ನಟ್ಟಿ ಕೊಂಗುನಾಡನ್ನು ವಶಪಡಿಸಿಕೊಂಡ. ಹಾಗೆಯೇ ಚೋಳ ಪ್ರಾಂತಗಳಾಗಿದ್ದ ಘಟ್ಟದ ಕೆಳಗಿನ ಚೆಂಗಿರಿ, ಬೆಂಗಿರಿಗಳ ಮೇಲೂ ದಾಳಿಮಾಡಿದ. ಹಿಂದೊಮ್ಮೆ ಕೇವಲ ದಾಳಿಮಾಡಿದ್ದ ಕೋಲಾರ, ನಂಗಲಿ ಪ್ರಾಂತಗಳನ್ನೂ ಹಾಗೆಯೇ ಕೊಯಮತ್ತೂರು, ನಿಡುಗಲ್ಲು ಕೋಟೆ, ಹೆಂಜೇರು, ಬೂದಲಿ, ರೊಡ್ಡಂ ವಲ್ಲೂರುಗಳನ್ನೂ ಗೆದ್ದ. ಈ ಪ್ರದೇಶದಿಂದ ಉತ್ತರಕ್ಕೆ ಸರಿದು ಉಚ್ಚಂಗಿಯ ಪಾಂಡ್ಯನನ್ನು ಮತ್ತೊಮ್ಮೆ ಎದುರಿಸಿ ದುಮ್ಮೆ ಎಂಬಲ್ಲಿನ ಕದನದಲ್ಲಿ ಅವನನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಂಡ (ಸು. 1116-17). ಕೆಲವು ಶಾಸನಗಳ ಪ್ರಕಾರ ಇದೇ ಸಂದರ್ಭದಲ್ಲಿ ವಿಷ್ಣುವರ್ಧನ ಕಂಚಿಯನ್ನೂ ಆಕ್ರಮಿಸಿ, ರಾಮೇಶ್ವರದವರೆಗೂ ಮುನ್ನಡೆದನೆಂದು ಹೇಳಿದರೂ ಇದಕ್ಕೆ ಪೂರಕ ಆಧಾರಗಳು ಸಾಲದಾಗಿವೆ. 1117ರ ಬೇಲೂರು ಶಾಸನದಲ್ಲಿ ಚೋಳ ಅಧಿಕಾರಿಗಳಾದ ಆದಿಯಮ, ನರಸಿಂಹಬ್ರಹ್ಮ, ಕಳಪಾಳ, ಪಟ್ಟಿಪೆರ್ಮಾಳ, ಚೆಂಗಿರಿ ಪೆರ್ಮಾಳ ಮುಂತಾದವರನ್ನೂ (ನಿಡುಗಲ್ಲಿನ) ಇರುಂಗೊಳನನ್ನೂ ಸೋಲಿಸಿ, ತಳವನಪುರ (ತಲಕಾಡು), ಕೊಂಗುನಾಡು (ಕೊಯಮತ್ತೂರು ಮತ್ತು ಸೇಲಂ ಜಿಲ್ಲೆಯ ಪ್ರದೇಶಗಳು), ನೊಳಂಬವಾಡಿ (ಚಿತ್ರದುರ್ಗ, ಕೋಲಾರ ಮತ್ತು ಸುತ್ತಲ ಪ್ರದೇಶಗಳು), ನೀಲಪರ್ವತ (ನೀಲಗಿರಿ), ಕೋಳಾಳಪುರ (ಕೋಲಾರ), ಕೊಯತೂರು (ಲಡ್ಡಿಗಂ, ಅನಂತಪುರ ಜಿಲ್ಲೆ), ತೆರಿಯೂರು, ವಲ್ಲೂರು, ನಂಗಲಿಪುರ (ಕೋಲಾರ, ಅನಂತಪುರ, ತುಮಕೂರು ಜಿಲ್ಲೆಗಳಲ್ಲಿರುವ ಸ್ಥಳಗಳು), ಕಾಂಚೀಪುರ-ಇವುಗಳನ್ನು ಗೆದ್ದು ಪೂರ್ವದಲ್ಲಿ ನಂಗಲಿಯ ಘಟ್ಟ (ಮುಳಬಾಗಲು ಬಳಿ ನಂಗಲಿ, ಕೋಲಾರ ಜಿಲ್ಲೆ) ಉತ್ತರದಲ್ಲಿ ಸಾವಮಲೆ (ಸಂಡೂರು ಕುಮಾರಸ್ವಾಮಿ ಬೆಟ್ಟ, ಬಳ್ಳಾರಿ ಜಿಲ್ಲೆ), ದಕ್ಷಿಣದಲ್ಲಿ ಕೊಂಗು ಚೇರಮನಮಲೆ (ಕೊಯಮತ್ತೂರು ಜಿಲ್ಲೆ), ಪಶ್ಚಿಮದಲ್ಲಿ ಕೊಂಕಣದ ಬಾರಕನೂರು ಘಟ್ಟ (ಬಾರಕೂರಿಗೆ ಹೋಗುವ ದಾರಿಯಲ್ಲಿನ ಘಟ್ಟ ಪ್ರದೇಶ)-ಇವುಗಳ ಮಧ್ಯದ ಭೂಮಿಯನ್ನು ವಿಷ್ಣುವರ್ಧನ ಆಳುತ್ತಿದ್ದನೆಂದು ಹೇಳಿದೆ.

	ಈ ಮಧ್ಯೆ ತನ್ನ ಸಾಮಂತರನ್ನು ಸೋಲಿಸಿ ತನ್ನ ಪರಮಾಧಿಕಾರವನ್ನು ಅಲಕ್ಷಿಸಿದ್ದರಿಂದ ಕೋಪಗೊಂಡ ಚಾಳುಕ್ಯ ಸಾಮ್ರಾಟ ಆರನೆಯ ವಿಕ್ರಮಾದಿತ್ಯ ವಿಷ್ಣುವರ್ಧನನ್ನು ಶಿಕ್ಷಿಸಲು ನಿರ್ಧರಿಸಿದ. ತನ್ನ ಹನ್ನೆರಡು ಮಹಾಮಂಡಲೇಶ್ವರರ ಸೈನ್ಯವನ್ನು ಕಲೆಹಾಕಿ ಸಿಂಧ ಮಹಾಸಾಮಂತ ಆಚರಸನನ್ನು ಮುಖಂಡನನ್ನಾಗಿ ನೇಮಿಸಿ ದೋರಸಮುದ್ರವನ್ನು ಮುತ್ತಲು ಕಳುಹಿಸಿದ. ಹಾಸನ ಜಿಲ್ಲೆಯ ಕಣ್ಣೇಗಾಲ ಎಂಬ ಗ್ರಾಮದ ಬಳಿ ನಡೆದ ಯುದ್ಧದಲ್ಲಿ ಹೊಯ್ಸಳ ಸೇನಾನಿ ಗಂಗರಾಜ ಚಾಳುಕ್ಯ ಸೈನ್ಯವನ್ನು ಸೋಲಿಸಿದ್ದಲ್ಲದೆ ವೈರಿಗಳನ್ನು ಹೊಯ್ಸಳ ರಾಜ್ಯದಂಚಿನವರೆಗೂ ಬೆನ್ನಟ್ಟಿದ. ಪ್ರಾಯಶಃ ಚಾಳುಕ್ಯ ರಾಜ್ಯದ ಒಳಗೂ ನುಗ್ಗಿ ಬೆಳ್ವೊಲ ಪ್ರಾಂತವನ್ನೂ ಅಣ್ಣಿಗೆರೆ, ಗದಗ ಮುಂತಾದ ಪಟ್ಟಣಗಳನ್ನೂ ಗೆದ್ದು ಮಲಪ್ರಹಾರಿಯ (ಮಲಪ್ರಭಾ ನದಿ)ವರೆಗೂ ನುಗ್ಗಿದ. ಈ ವಿಜಯದಿಂದ ಹೊಯ್ಸಳರ ಇನ್ನೊಂದು ಧ್ಯೇಯವಾದ ಸ್ವತಂತ್ರರಾಜ್ಯ ಸ್ಥಾಪನೆ ಸಹ ಹೆಚ್ಚು ಕಡಿಮೆ ಸಾಧಿತವಾಯಿತು. ಆದರೆ 1120-21ರಲ್ಲಿ ಚಾಳುಕ್ಯರ ಪರವಾಗಿ ಇವನನ್ನು ಎದುರಿಸಿದ ಸಿಂಧಪೆರ್ಮಾಡಿದೇವನ ಕೈಮೇಲಾಗಿ ವಿಷ್ಣುವರ್ಧನ ತನ್ನ ರಾಜ್ಯಕ್ಕೆ ಹಿನ್‍ಸರಿದಂತೆ ತೋರುತ್ತದೆ. ಪೂರ್ವದಲ್ಲೂ ಸಹ 1120-30ರ ಸುಮಾರಿನಲ್ಲಿ ಚೋಳವಿಕ್ರಮಗಂಗ ಕೋಲಾರ ಪ್ರದೇಶವನ್ನು ಆಕ್ರಮಿಸಿರಬೇಕೆಂದು ಅಲ್ಲಿ ದೊರಕಿರುವ ಅವನ ಕೆಲವು ಶಾಸನಗಳಿಂದ ತಿಳಿಯಬಹುದು. ಅನಂತರ ವಿಷ್ಣುವರ್ಧನ ಹಲವು ವರ್ಷಗಳ ಕಾಲ ಸುಗಮ ಆಡಳಿತಕ್ಕೆ ಗಮನಕೊಟ್ಟು ಸಾಹಿತ್ಯಕಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ. 1127ರಲ್ಲಿ ವಿಕ್ರಮಾದಿತ್ಯ ಮರಣಹೊಂದಿದ ಅನಂತರ ಉತ್ತರದಲ್ಲಿ ತನ್ನ ರಾಜ್ಯವನ್ನು ಕೃಷ್ಣಾನದಿಯವರೆಗೂ ವಿಸ್ತರಿಸಲು ಯೋಚಿಸಿದ. 1128ರಲ್ಲಿ ಹಾನುಗಲ್ಲಿನ ಮೇಲೆ ದಾಳಿಮಾಡಿ ಆ ಪ್ರಾಂತವನ್ನು ಕೆಲಕಾಲ ಆಕ್ರಮಿಸಿಕೊಂಡಿದ್ದ. ಮುಂದಿನ ವರ್ಷ ಬಹುಶಃ ಚಾಳುಕ್ಯ ಸೋಮೇಶ್ವರ (ಭೂಲೋಕಮಲ್ಲ) ದಕ್ಷಿಣಕ್ಕೆ ಬಂದು ಹೊಯ್ಸಳ ಮುನ್ನಡೆಯನ್ನು ತಡೆದಿರಬೇಕು. ಆದರೆ 1131ರ ಹೊತ್ತಿಗೆ ಬೆಳ್ವೊಲದ ಲೊಕ್ಕಿಗುಂಡಿ (ಗದಗದ ಬಳಿಯ ಲಕ್ಕುಂಡಿ) ಸಹ ವಿಷ್ಣುವರ್ಧನನ ಅಧೀನದಲ್ಲಿತ್ತು. 1133ರ ಸುಮಾರಿನಲ್ಲಿ ಬಂಕಾಪುರ ಇವನ ವಶವಾಯಿತು. ಇದು ಇವನ ಅನೇಕ ಶಾಸನಗಳಲ್ಲಿ ಕೃಷ್ಣಾನದಿ ಹೊಯ್ಸಳ ರಾಜ್ಯದ ಉತ್ತರ ಎಲ್ಲೆಯಾಗಿ ಉಲ್ಲೇಖವಾಗಿದೆ. 1135ರಲ್ಲಿ ಕದಂಬವಂಶದ ಮಲ್ಲಿಕಾರ್ಜುನ ಹಾನುಗಲ್ಲನ್ನು ಪುನರಾಕ್ರಮಿಸಿಕೊಂಡ. ಆದರೂ ಹೊಯ್ಸಳರು ತಮ್ಮ ಉತ್ತರದ ಗಳಿಕೆಯನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಆದರೂ ಹೊಯ್ಸಳ ಕದಂಬ ಸೆಣಸಾಟ ನಡೆಯುತ್ತಲೇ ಇತ್ತು. ವಿಷ್ಣುವರ್ಧನ ಈ ಸಂದರ್ಭದಲ್ಲಿ ಬಂಕಾಪುರವನ್ನೂ ಒಂದು ಉಪರಾಜಧಾನಿಯಾಗಿ ಮಾಡಿಕೊಂಡು ಆ ಪ್ರದೇಶದ ರಕ್ಷಣೆಗೆ ವಿಶೇಷ ಗಮನವಿತ್ತಿದ್ದ. ಆ ವೇಳೆಗೆ ವೃದ್ಧಾಪ್ಯವನ್ನು ಸಮೀಪಿಸಿದ್ದ ವಿಷ್ಣುವರ್ಧನ 1142ರಲ್ಲಿ ಬಂಕಾಪುರದಲ್ಲಿ ಮೃತನಾದ. ವಿಷ್ಣುವರ್ಧನನ ಪಾರ್ಥಿವ ಶರೀರವನ್ನು ಅವನ ದಂಡನಾಯಕನಾದ ಬೊಪ್ಪ ವಿಶೇಷ ಗೌರವದೊಡನೆ ಮುದುಗೆರೆಗೆ ಸಾಗಿಸಿಕೊಂಡು ಬಂದು ಅಲ್ಲಿ ಉಚಿತವಾದ ಅಂತ್ಯಕ್ರಿಯೆ ಯನ್ನು ನೆರವೇರಿಸಿದರು. ವಿಷ್ಣುವರ್ಧನನಿಗೆ ಶಾಂತಲದೇವಿ ಮತ್ತು ಲಕ್ಷ್ಮೀದೇವಿ ಎಂಬ ಪತ್ನಿಯರಿದ್ದರು. ಇವರಲ್ಲದೆ ಬಮ್ಮಲದೇವಿ, ರಾಜಲದೇವಿ, ಶಾಂತಲ ದೇವಿ (ಕಿರಿಯ) ಮತ್ತು ದೇವಕೀದೇವಿ ಎಂಬ ಇತರ ಹೆಂಡತಿಯರೂ ಇದ್ದರೆಂಬುದಕ್ಕೆ ಸೂಚನೆಗಳಿವೆ. ವಿಷ್ಣುವರ್ಧನನ ಮೊದಲ ಶಾಸನಗಳಲ್ಲೆಲ್ಲ ಶಾಂತಲದೇವಿ ಪಟ್ಟಮಹಿಷಿಯಾಗಿ ಕಾಣಿಸಿ ಕೊಳ್ಳುತ್ತಾಳೆ. ಈಕೆ 1131ರಲ್ಲಿ ಮೃತಳಾದಮೇಲೆ ಲಕ್ಷ್ಮೀದೇವಿ ಪಟ್ಟದ ರಾಣಿಯಾದಳು. ವಿಷ್ಣುವರ್ಧನನ ಮಕ್ಕಳಲ್ಲಿ ಶಾಂತಲದೇವಿಯಲ್ಲಿ ಜನಿಸಿದ ಬಲ್ಲಾಳ ಮತ್ತು ಹರಿಯಲದೇವಿ, ಲಕ್ಷ್ಮೀದೇವಿಯಲ್ಲಿ ಜನಿಸಿದ ನರಸಿಂಹ ಮುಖ್ಯರಾದವರು. ಈ ಕುಮಾರ ಬಲ್ಲಾಳ ಸು. 1129ರಲ್ಲಿ ಮೃತನಾದ. ಆದರೆ ವಿಷ್ಣುವರ್ಧನನಿಗೆ ಇವರಲ್ಲದೆ ಚಿಕ್ಕಬಿಟ್ಟಿದೇವ ಮತ್ತು ವಿನಯಾದಿತ್ಯ ಎಂಬ ಇತರೆ ಇಬ್ಬರು ಮಕ್ಕಳು ಇದ್ದರೆಂದೂ ಇವರೂ ಮತ್ತು ಹಿರಿಯ ಮಗ ಬಲ್ಲಾಳ ಸಹ ನರಸಿಂಹನ ಆಳಿಕೆಯ ಕಾಲದಲ್ಲೂ ಬದುಕಿದ್ದರೂ ನರಸಿಂಹ ರಾಜ್ಯಾಕ್ರಮಣ ಮಾಡಿಕೊಂಡಿರಬೇಕೆಂಬ ಒಂದು ಅಭಿಪ್ರಾಯ ಇದೆ. ರಾಜಮನೆತನದ ಶಾಂತಲದೇವಿ, ಲಕ್ಷ್ಮೀದೇವಿ, ಕುಮಾರ ಬಲ್ಲಾಳ ಮತ್ತು ನರಸಿಂಹ ಇವರುಗಳು ರಾಜ್ಯಾಡಳಿತದಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದರು. ಅಲ್ಲದೆ ವಿಷ್ಣುವರ್ಧನನ ತಮ್ಮನಾದ ಉದಯಾದಿತ್ಯ ತಲಕಾಡನ್ನು ಆಕ್ರಮಿಸಿದ ಅನಂತರ ಆ ಪ್ರಾಂತಕ್ಕೆ ಅವನ ಅವಸಾನದ ವರೆಗೂ (ಸು. 1123-24) ರಾಜಪ್ರತಿನಿಧಿಯಾಗಿದ್ದ. ಮರಿಯಾನೆ, ಅವನ ತಮ್ಮ ಭರತ ಮತ್ತು ಮಗ ಬಿಟ್ಟಿಯಣ್ಣ, ಗಂಗರಾಜ (ಮರಣ 1133), ಅವನ ಮಕ್ಕಳು ಏಚ ಮತ್ತು ಬಪ್ಪ, ಪುಣಿಸಮಯ್ಯ, ಬೋಕಣ್ಣ, ವಿಷ್ಣುವರ್ಧನನ ಮುಖ್ಯ ದಂಡನಾಯಕರು. ಮಾದಿರಾಜ ಇವನ ಪ್ರಧಾನಿ. ರಾಷ್ಟ್ರಕೂಟ ವಂಶೀಯನಾದ ಗೂಳಿಬಾಚಿ, ಆಸಂದಿಯ ಗಂಗರು, ತಮಿಳು ಬ್ರಹ್ಮಾಧಿರಾಯರು, ಹುಳಿಯೇರ ಚಟ್ಟ, ಚಾಳುಕ್ಯಕುಲದ ಬಾಚರಸ ಇವನ ಮುಖ್ಯ ಸಾಮಂತರು.

	ಕರ್ನಾಟಕದ ಸಾಂಸ್ಕøತಿಕ ಇತಿಹಾಸದಲ್ಲಿ ವಿಷ್ಣುವರ್ಧನನ ಕಾಲ ವೈಭವಯುತವಾದ ಸುವರ್ಣಾಧ್ಯಾಯ. ಇವನ ಕಾಲದಲ್ಲಿ ಜೈನ, ವೈಷ್ಣವ, ಶೈವಪಂಥಗಳ ಪುರೋಭಿವೃದ್ಧಿಯಾಯಿತು. ತನ್ನ ಹಿಂದಿನವ ರಂತೆ ವಿಷ್ಣುವರ್ಧನ ಪ್ರಾರಂಭದಲ್ಲಿ ಜೈನಧರ್ಮೀಯನಾಗಿದ್ದನೆಂದೂ ರಾಮಾನುಜಾಚಾರ್ಯರ ಆಗಮನಾನಂತರ ವೈಷ್ಣವ ಪಂಥವನ್ನು ಸ್ವೀಕರಿಸದನೆಂದೂ ಪ್ರತೀತಿಯಿದೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳು ಪ್ರಚಲಿತವಾಗಿವೆ. ಒಂದು ಐತಿಹ್ಯದ ಪ್ರಕಾರ ಇವನ ಕುಮಾರಿಯಾದ ಹರಿಯಲದೇವಿ ಗ್ರಹದೋಷದಿಂದ ನರಳುತ್ತಿದ್ದ ಳೆಂದೂ ಜೈನಯತಿಗಳ ಪ್ರಯತ್ನ ಅವಳ ಕುತ್ತನ್ನು ಪರಿಹರಿಸಲು ವಿಫಲವಾಯಿತೆಂದೂ ಅನಂತರ ರಾಮಾನುಜಾಚಾರ್ಯರು ತಮ್ಮ ಮಂತ್ರಶಕ್ತಿಯಿಂದ ರಾಜಕುಮಾರಿಯ ಕಂಟಕವನ್ನು ಪರಿಹರಿಸಿದರೆಂದೂ ಅದರಿಂದ ಸುಪ್ರೀತನಾದ ವಿಷ್ಣುವರ್ಧನ ವೈಷ್ಣವಧರ್ಮಕ್ಕೆ ಮತಾಂತರ ಹೊಂದಿದನೆಂದೂ ತಿಳಿದುಬರುತ್ತದೆ. ಇನ್ನೊಂದು ಹೇಳಿಕೆಯ ಪ್ರಕಾರ ವಿಷ್ಣುವರ್ಧನನಿಗೆ ಲಕ್ಷ್ಮೀ ಎಂಬ ವೈಷ್ಣವಪಂಥದ ರಾಣಿಯೊಬ್ಬಳಿದ್ದ ಳೆಂದೂ ಅವಳು ಪ್ರಾರಂಭದಿಂದಲೂ ವೈಷ್ಣವ ಧರ್ಮವನ್ನು ಸ್ವೀಕರಿಸುವಂತೆ ಅವನನ್ನು ಪ್ರೇರೇಪಿಸುತ್ತಿದ್ದಳೆಂದೂ ಕೊನೆಗೆ ರಾಮಾನು ಜಾಚಾರ್ಯರು ಹೊಯ್ಸಳ ರಾಜಧಾನಿಗೆ ಭೇಟಿ ನೀಡಿದ ಅನಂತರ ಇವನು ವೈಷ್ಣವಪಂಥ ವನ್ನು ಸ್ವೀಕರಿಸಿದನೆಂದೂ ತಿಳಿದುಬರುತ್ತದೆ. ಮತ್ತೊಂದು ಐತಿಹ್ಯದ ಪ್ರಕಾರ ವಿಷ್ಣುವರ್ಧನ ಯುದ್ಧವೊಂದರಲ್ಲಿ ತನ್ನ ಬೆರಳೊಂದನ್ನು ಕಳೆದುಕೊಂಡನೆಂದೂ ಅದರಿಂದ ಜೈನಮತೀಯರು ಇವನಿಗೆ ಸಹಪಂಕ್ತಿ ಭೋಜನವನ್ನು ನಿರಾಕರಿಸಿದರೆಂದೂ ಈ ಕಾರಣದಿಂದ ವಿಷ್ಣುವರ್ಧನ ವೈಷ್ಣವಧರ್ಮ ಸ್ವೀಕರಿಸಿದನೆಂದೂ ಹೇಳಲಾಗುತ್ತದೆ. ಈ ಘಟನೆಗೆ ಪೂರಕವಾಗಿ ಇವನಿಗೆ ಜೈನಧರ್ಮಾವ ಲಂಬಿಯಾಗಿದ್ದಾಗ ಬಿಟ್ಟಿದೇವನೆಂಬ ಹೆಸರಿತ್ತೆಂದೂ ವೈಷ್ಣವನಾದ ಮೇಲೆ ವಿಷ್ಣುವರ್ಧನ ಎಂಬ ಹೆಸರನ್ನು ಪಡೆದನೆಂದೂ ಪ್ರತೀತಿ. ವಿಷ್ಣುವರ್ಧನ ಎಂಬುದು ಇವನ ಹೊಸ ನಾಮಾಂಕಿತವಲ್ಲ. ಇದು ಬಿಟ್ಟಿದೇವ-ವಿಠಲದೇವ-ವಿಷ್ಣುವರ್ಧನ ಎಂಬ ಪರಿವರ್ತನೆಯಲ್ಲದೆ ಬೇರಲ್ಲ. ಮಿಗಿಲಾಗಿ ಇವನಿಗೆ ಬಾಲ್ಯದಿಂದಲೂ ಬಿಟ್ಟಿ ಮತ್ತು ವಿಷ್ಣು ಎಂದು ಕರೆಯಲಾಗುತ್ತಿತ್ತು. ವಿಷ್ಣುವರ್ಧನ ರಾಜನಾಗುವ ಹಲವು ವರ್ಷಗಳ ಮೊದಲೇ (ಸು. 1095) ತನ್ನ ಕಾಲದಲ್ಲಿ ಪ್ರಾಂತಾಧಿಕಾರಿ ಯಾಗಿದ್ದಾಗ ಈತ ನಿರ್ಮಿಸಿದ ಬೆಳಗೊಳದ ಆಗ್ರಹಾರಕ್ಕೆ ವಿಷ್ಣುವರ್ಧನ ಚತುರ್ವೇದಿಮಂಗಲ ಎಂಬ ಹೆಸರಿದ್ದುದು ಇವನನ್ನು ಬಾಲ್ಯದಿಂದಲೂ ವಿಷ್ಣುವರ್ಧನ ಎಂದು ಕರೆಯಲಾಗುತ್ತಿತ್ತೆಂಬುದನ್ನು ಖಚಿತಪಡಿಸುತ್ತದೆ. ಆದ್ದರಿಂದ ಈತ ರಾಜನಾದ ಮೇಲೆ ರಾಮಾನುಜಾಚಾರ್ಯರ ಆಗಮನಾನಂತರ ವೈಷ್ಣವಧರ್ಮ ಸ್ವೀಕರಿಸಿದ ನೆಂಬುದನ್ನೂ ಹೊಸ ನಾಮಾಂತರ ಪಡೆದನೆಂಬುದನ್ನೂ ನಂಬಲು ಸಾಕಷ್ಟು ಆಧಾರಗಳಿಲ್ಲ. ಇವನು ಮತ ಬದಲಾವಣೆಯ ಅನಂತರ ಜೈನಬಸದಿಗಳನ್ನು ನಾಶಪಡಿಸಿ ಅವುಗಳ ಸಾಮಗ್ರಿಗಳಿಂದ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನೆಂದೂ ಹೇಳಲಾಗಿದೆ. ಸಮಕಾಲೀನ ಶಾಸನಗಳು ಮತ್ತು ಇತರ ಆಧಾರಗಳಿಂದ ಮೇಲ್ಕಂಡ ಹೇಳಿಕೆ ಹಾಸ್ಯಾಸ್ಪದವೆಂದು ಖಚಿತವಾಗುತ್ತದೆ. ವಿಷ್ಣುವರ್ಧನನ ಅರಮನೆಗೆ ಅನತಿದೂರದಲ್ಲೇ ಸುಪ್ರಸಿದ್ಧ ಬಸದಿಗಳು ಇವನ ಕಾಲದಲ್ಲೇ ಕಟ್ಟಲ್ಪಟ್ಟವು. ಇವನ ನೆಚ್ಚಿನ ಪಟ್ಟದರಾಣಿಯಾಗಿದ್ದ ಶಾಂತಲದೇವಿ ಜೈನಧರ್ಮಾವಲಂಬಿ. ಮಿಗಿಲಾಗಿ ವಿಷ್ಣುವರ್ಧನನ ದಂಡನಾಯಕರಾದ ಪುಣಿಸ, ಬಾಹುಬಲಿ, ವಿಷ್ಣು, ಹುಲ್ಲಯ್ಯ, ಬೋಕಿಮಯ್ಯ ಮತ್ತು ಇನ್ನೂ ಇತರರು ಜೈನಧರ್ಮೀಯರು. ಅದರಲ್ಲೂ ವಿಷ್ಣುವರ್ಧನನ ಬಲಭುಜವೆಂದೂ ಇವನ ಶ್ರೇಯಸ್ಸಿನ ಪೂರ್ಣ ಕುಂಭ ಸಮಾನವೆಂದೂ ಶಾಸನಗಳಿಂದ ತಿಳಿದುಬರುವ ಅಮಾತ್ಯಗಂಗರಾಜ ಜೈನ. ವಿಷ್ಣುವರ್ಧನನ ಆಸ್ಥಾನದಲ್ಲಿ ಜೈನಕವಿಗಳೂ ಪಂಡಿತರೂ ಇದ್ದರು. ಶ್ರವಣಬೆಳಗೊಳ ಮತ್ತು ಇತರ ಕಡೆಗಳಲ್ಲಿ ಅನೇಕ ಬಸದಿಗಳು ನಿರ್ಮಾಣವಾದವು. ಆದ್ದರಿಂದ ವಿಷ್ಣುವರ್ಧನನ ನಡೆ, ನುಡಿ ಮತ್ತು ಕಾರ್ಯದಲ್ಲಿ ಧಾರ್ಮಿಕ ಅಸಹನೆ ಅಥವಾ ಅಸಮಾನತೆಯ ಕುರುಹು ಕಾಣಬರುವುದಿಲ್ಲ. ಇವನು ವೈಷ್ಣವಪಂಥಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದರೂ ಶೈವ ಮತ್ತು ಜೈನಪಂಥಗಳಿಗೂ ಉದಾರ ಪ್ರೋತ್ಸಾಹ ನೀಡಿದ. ಸರ್ವಧರ್ಮಸಹಿಷ್ಣುವಾಗಿದ್ದ ವಿಷ್ಣುವರ್ಧನನ ಸ್ವಂತ ಧರ್ಮ ವೈಷ್ಣವ ಇರಬಹುದೆಂಬುದು ಮಾತ್ರ ಶಾಸನೋಕ್ತವಾದ ಮುಕುಂದಪಾ ದಾರ ವಿಂದಭ್ರಮರ ಎಂಬ ವಿಶೇಷಣದಿಂದ ತಿಳಿಯಬಹುದಾಗಿದೆ. ರಾಮಾನುಜಾಚಾರ್ಯರಿಗೂ ವಿಷ್ಣುವರ್ಧನನಿಗೂ ಇದ್ದ ಸಂಬಂಧ ಶಾಸನಗಳಿಂದ ಖಚಿತವಾಗಿ ತಿಳಿಯುವುದಿಲ್ಲ. ಆದರೆ ಬೇಲೂರು ಮತ್ತು ಸಾಲಿಗ್ರಾಮದ ಶಾಸನಗಳಲ್ಲಿ ಶ್ರೀ ವೈಷ್ಣವರ ಉಲ್ಲೇಖ ದೊರಕುತ್ತದೆ. ವಿಷ್ಣುವರ್ಧನನ ಪ್ರೋತ್ಸಾಹದಿಂದ ಸಾಹಿತ್ಯ ಮತ್ತು ಕಲೆ ಇವುಗಳಲ್ಲಿ ವಿಶೇಷ ಪುರೋಭಿವೃದ್ಧಿಯುಂಟಾಯಿತು. ಇವನ ಆಸ್ಥಾನದಲ್ಲಿ ನಾಗಚಂದ್ರ (ಅಭಿನವಪಂಪ), ಕಂತಿ ಮೊದಲಾದ ಕವಿಗಳಿದ್ದರು. ಇವನು ಅನೇಕ ಅಗ್ರಹಾರಗಳ ಸ್ಥಾಪನೆಯ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ. ಇವನ ಕಾಲದಲ್ಲಿ ಹಳೇಬೀಡಿನ ವಿಜಯ, ಪಾಶ್ರ್ವನಾಥ, ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮೀ, ತೊಣ್ಣೂರಿನ ನಾರಾಯಣ, ತಲಕಾಡಿನ ಕೀರ್ತಿನಾರಾಯಣ ಮೊದಲಾದ ಸುಂದರ ದೇವಾಲಯಗಳು ನಿರ್ಮಾಣವಾದವು.
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
				
		(ಜಿ.ಆರ್.ಆರ್.)